ಕಡವಾಳ : ರೂಬಿಯೇಸೀ ಕುಟುಂಬದ ಸ್ಟೆಫೆಗೈನ್ ಪಾರ್ವಿಫೋಲಿಯ ಎಂಬ ವೈಜ್ಙಾನಿಕ ಹೆಸರಿನ ದುಂಡು ಹಂದರದ ದೊಡ್ಡ ಪ್ರಮಾಣದ ಅಸ್ಥಿರ ಪರ್ಣವೃಕ್ಷ.  ಕೊಂಬೆಗಳಿಂದೊಡಗೂಡಿದ ತುಂಡು ಕಾಂಡದ ಈ ಮರದ ತೊಗಟೆ ಬೂದು ಬಣ್ಣವಾಗಿರುತ್ತದೆ.  ತೊಗಟೆ ಉದುರಿದಾಗ ಕಾಂಡದ ಮೇಲೆ ಸಣ್ಣ ಗುಣಿಗಳು ಕಾಣಿಸುವುವು.

ಹಿಮಾಲಯ ತಪ್ಪಲಿನ ನಾಲ್ಕು ಸಾವಿರ ಅಡಿಗಳ ಎತ್ತರದವರೆಗಿನಿಂದ ಹಿಡಿದು ಭಾರತದ ಅಸ್ಥಿರಪರ್ಣದ ಕಾಡುಗಳಲ್ಲಿ ಅಲ್ಲಲ್ಲಿ ಈ ಮರ ಬೆಳೆಯುತ್ತದೆಯಾದರೂ ಎಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬರುವುದಿಲ್ಲ. ಫೆಬ್ರುವರಿ-ಮಾರ್ಚಿ ತಿಂಗಳುಗಳಲ್ಲಿ ಎಲೆ ಉದುರಿ, ಹೊಸ ಚಿಗುರು ಮೇ ತಿಂಗಳ ಸುಮಾರಿಗೆ ಬರುತ್ತದೆ.  ಹೂಗಳು ಮೇ-ಜುಲೈನಲ್ಲಿ ಮೂಡುತ್ತವೆ.  ಮರು ಏಪ್ರಿಲ್ನ ಹೊತ್ತಿಗೆ ಕಾಯಿಗಳು ಮಾಗುತ್ತವೆ.  ಬೀಜ ಬಲು ಸಣ್ಣ.  ಮೆಕ್ಕಲು ಮಣ್ಣಿನ ಭೂಮಿಯಲ್ಲಿ ಸ್ವಾಭಾವಿಕವಾಗಿ ಬೀಜಗಳು ಮೊಳೆತು ಹೊಸ ಗಿಡಗಳು ಕಾಣಿಸಿಕೊಳ್ಳುತ್ತವೆ.

ಇದರ ಚೌಬೀನೆ ಎಳೆಗೆಂಪು ಬಣ್ಣದ್ದು.  ಮನೆಕಟ್ಟುವುದಕ್ಕೂ ಪೀಠೋಪಕರಣಗಳನ್ನು ವ್ಯವಸಾಯದ ಉಪಕರಣಗಳಿಗೂ ನೂಲಿನ ಗಿರಣಿಯ ಉರುಳೆ (ಬಾಬಿನ್) ತಯಾರಿಕೆಗೂ ಬಾಚಣಿಗೆ, ಮರದ ಚಮಚ, ಬಟ್ಟಲು ಹಾಗೂ ಕೆತ್ತನೆಯ ಮತ್ತು ಕಡೆತದ ಕೆಲಸಗಳಿಗೂ ಇದನ್ನು ಉಪಯೋಗಿಸುವರು.                                         	(ಎ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ